ಮಳೆಯಲ್ಲಿ ನೆನೆದ ಕಥೆಗಳು

 



(ವಿವಿಧ ಲೇಖಕರ ಕತೆಗಳ ಗುಚ್ಚ)

ಕಥಾಗುಚ್ಛದ ಹೆಸರು 'ಮಳೆಯಲ್ಲಿ ನೆನೆದ ಕಥೆಗಳು'. ಅಂದರೆ ಮಳೆಯಲ್ಲಿ ನೆಂದಾಗ ನಮಗೆ ಆಹ್ಲಾದವಾಗುವುದಿಲ್ಲವೇ... ಈ ಕಥೆಗಳನ್ನು ಓದಿದಾಗ ನಮಗೆ ಅದೇ ರೀತಿ ಖುಷಿಯಾಗುತ್ತದೆ. ಏಕೆಂದರೆ ಇಲ್ಲಿನ ಕಥೆಗಳಲ್ಲಿ ಹೊಸತನವಿದೆ, ಲವಲವಿಕೆ ಇದೆ. ಕತೆಗಾರರು ಯಾವ ಮುಲಾಜಿಗೂ ಕಟ್ಟುಬೀಳದೇ ತಮಗನ್ನಿದಂತೆ ಸ್ವತಂತ್ರವಾಗಿ ಬರೆದಿದ್ದಾರೆ. ಈ ಹೊಸತನವೇ ನನಗೆ ಮಳೆಯಲ್ಲಿ ನೆಂದಷ್ಟು ಖುಷಿ ಕೊಟ್ಟಿದ್ದು. 

ಅದಕ್ಕಿಂತಲೂ ಖುಷಿ ತಂದವರು ಈ ಕಥೆಗಳನ್ನು ಆಯ್ಕೆ ಮಾಡಿರುವ ಸಂಪಾದಕರು. ಇಂತಹಾ ನವ್ಯ ರೀತಿಯ ಕಥೆಗಳನ್ನು ಗುರುತಿಸಿ, ಆಯ್ಕೆ ಮಾಡಿ, ನಮ್ಮವರೆಗೂ ತಲುಪಿಸಿದ ಅವರಿಗೆ ನಿಜಕ್ಕೂ ನಾನು ಕೃತಜ್ಞೆ. ಬಹಳ ಹೊಸತನದಿಂದ ಕೂಡಿರುವ ಈ ಕತೆಗಳಿಗೆ ಅವರು ಮನ್ನಣೆ ಕೊಟ್ಟಿರುವುದೇ ಖುಷಿ ತರುತ್ತದೆ. 

ಕಥಾಗುಚ್ಚ ತೆರೆದುಕೊಂಡ ನಂತರ ಮೊದಲು ಸಿಗುವ ಕಥೆ "ಪರಿಕಲಿತ". ರಂಜನಿ ಕೀರ್ತಿ ಅವರ ಈ ಕತೆ ನಮ್ಮನ್ನು ಈ ಕಾಥಾಲೋಕಕ್ಕೆ ಎಳೆದುಕೊಳ್ಳಲು ಸಶಕ್ತವಾಗಿದೆ. ಮೊದಲ ಕತೆ ಹುಟ್ಟಿಸುವ ಭರವಸೆಯೇ, ಇಡೀ ಕಥೆಸಂಕಲನ ಓದಲು ಪ್ರೇರೇಪಿಸುತ್ತದೆ. ನಾವೆಲ್ಲಾ ಸಾಮಾನ್ಯದಲ್ಲಿ ಮತ್ತೊಬ್ಬರ ಜೀವನದಲ್ಲಿ ಏನು ಯೋಚಿಸುತ್ತೇವೆಯೋ, ಹಾಗೆ ನಮ್ಮ ದೃಷ್ಟಿಯಿಂದಲೇ ಕಥೆ ಮುನ್ನಡೆಸುತ್ತಾ, ಕೊನೆಗೆ ಕೊಡುವ ಷಾಕ್ ಇದೆಯಲ್ಲ..... 440 ವೋಲ್ಟಿಗಿಂತಲೂ ಹೆಚ್ಚು. 

ನಂತರದ ಕಥೆ 'ಮಾಂಕಾಳಿ'. ವಾಣಿ ಸುರೇಶ್ ಅವರ ಈ ಕತೆ ತಾಯಿಯರ ಜೀವನದಲ್ಲಿ ನಡೆಯುವಂಥದ್ದೇ. ಬಡವರೋ, ಸಿರಿವಂತರೋ... ತಾಯಿಯಾದವಳು ತನ್ನ ಮಗಳನ್ನು ಕಾಪಾಡಲು ಯಾವ ಹಂತಕ್ಕಾದರೂ ಇಳಿಯುತ್ತಾಳೆ. ಆಕೆ ಜಗತ್ ಜನನಿಯೂ ಹೌದು, ಜಗತ್ ವಿನಾಶಕಿಯೂ ಹೌದು. 

'ಡ್ರಾಮಾ ಕಂಪನಿ'ಯ ಇನ್ಸ್ಟಾಗ್ರಾಂ ಕಥೆ ಈ ಜನರೇಷನ್‌ದು. ಹಳಬಳಾದ ನಾನು ಇದನ್ನು ಕುತೂಹಲದಿಂದ‌ ಓದಿದೆ. ಅರ್ಥ ಆಗುತ್ತದೆಯೋ ಇಲ್ಲವೋ ಎಂದುಕೊಂಡಿದ್ದೆ. ಆದರೆ ಎಷ್ಟು ಇಷ್ಟವಾಯ್ತು ಎಂದರೆ, ಇನ್ಸ್ಟಾಗ್ರಾಂ ಬಳಸುವ ನನ್ನ ಮಕ್ಕಳ ಜೊತೆ‌ ಈ ಕಥೆ ಬಗ್ಗೆ ಚರ್ಚೆ ಮಾಡುವಷ್ಟು ಈ ಕಥೆ ಖುಷಿಕೊಟ್ಟಿತು. 

'ಪ್ರಿಯಾ ಕೆರ್ವಾಶೆ' ಅವರ ಕಥೆ ಪತ್ರಿಕೋದ್ಯಮದ ಡೆಡ್ ಲೈನ್ ಬಗ್ಗೆ ಯೋಚಿಸುವಂತೆ ಮಾಡಿದರೆ, 'ವ್ಯಕ್ತ' ಕಥೆ ಎರೆಡೆರೆಡು ಬಾರಿ ಓದುವಂತೆ ಮಾಡಿತು. ಮಳೆಯಲ್ಲಿ ನೆನೆದ ಕಥೆಗಳು ಮೊದಲ ಬಾರಿ ಕಣ್ಣೀರಿನಲ್ಲಿ ತೋಯಿಸಿತು. 

'ಬಿದಿಗೆ ಚಂದ್ರಮನ ಬಿಕ್ಕು' ಅಸಹಾಯತೆಯಿಂದ ಯೋಚಿಸುವಂತೆ ಮಾಡಿತು.‌ ಆ ಹೆಣ್ಣುಮಗಳಿಗಾದ ಅನ್ಯಾಯ ತೆರೆಮರೆಯಲ್ಲಿರುವ ಸಾಕಷ್ಟು ಸತ್ಯಗಳನ್ನು ಹೊರಗೆಳೆದಂತೆ ಭಾಸವಾಯ್ತು. 

'ಸಂಪಂಜು' ಸಹ ನವೀನವಾದ ಕತೆ. ನಾವು ಜೀವನದಲ್ಲಿ ಅಂದ್ಕೊಳ್ಳೋದೇ ಒಂದು, ಮಾಡೋದೇ ಒಂದು. ಒಂದ್ವೇಳೆ ಅಂದ್ಕೊಂಡ ಹಾಗೇ ಮಾಡಿಬಿಟ್ಟರೆ, ಹೀಗೆ ಮಾಡಬೇಕಿತ್ತು ಅನ್ನೋ ತುಡಿತಾ ಕೊನೆವರೆಗೂ ಇರುತ್ತಾ? ಅಥವಾ ಹೀಗಿರಬೇಕಿತ್ತು ಅನ್ನೋ ಹಂಬಲಿಕೆಯೇ ನಿಜವಾದ ಜೀವನವಾ? ಅಂತ ಹೇಳುವ ಕಥೆ. ಶುರು ಮಾಡಿದ್ದೊಂದೇ.... ಬೈಕಿನ ಥರ ಓಡಿಸಿಕೊಂಡು ಅಲ್ಲಲ್ಲ ಓದಿಸಿಕೊಂಡು ಹೋಯ್ತು.

'ಪ್ರತಿಬಿಂಬ'ದ ಕಜ್ಜಾಯದ ಕತೆ ಓದಿ, ನಾನೂ ಈ ಸಲ ಹಬ್ಬಕ್ಕೆ ಮನೇಲೇ ತಿಂಡಿ ಮಾಡ್ಬೇಕು ಅಂತ ನಿರ್ಧಾರ ಮಾಡಿದ್ದೀನಿ. ಅದೆಷ್ಟು ಕಷ್ಟ ಆದ್ರೂ ಸರಿ... 

ಶಾಂತಲಾ ಭಂಡಿ ಅವರ 'ಮಾಯಾ' ಓದುತ್ತಿದ್ದಂತೆ ಉಂಟಾದ ಭಾವವನ್ನು ಹಿಡಿದಿಡಲಾಗದೇ, ಕೂಡಲೇ ಮತ್ತೊಂದು ಪುಸ್ತಕಕ್ಕೆ ಆರ್ಡರ್ ಕೊಟ್ಟುಬಿಟ್ಟೆ( ಇಷ್ಟು ಚಂದದ ಕಥೆಗಳನ್ನು ನನಗಿಷ್ಟವಾದವರಿಗೆ ಗಿಫ್ಟ್ ಕೊಡಬೇಕೆಂದು). ಈ ಕಥೆಯನ್ನು ಓದಿಯೇ ಸವಿಯಬೇಕು. ನನಗೆ ತೀರಾ ಅಪರಿಚಿತವಾಗಿರುವ ಸಾಫ್ಟ್‌ವೇರ್ ಕ್ಷೇತ್ರದ ಕಥೆ ಇದು. ಆದರೆ ಸುಲಲಿತವಾಗಿ ಓದಿಸಿಕೊಂಡಿತು. 

ಈ ಬಾರಿ ಲಾಕ್ಡೌನ್‌ನಲ್ಲಿ ಎಲ್ಲರ ಅನುಭವವೇ ಆಗಿರುವ 'ವಿಭಕ್ತ' ಅತ್ಯುತ್ತಮ ಕಥೆ. 

ಇದರಲ್ಲಿರುವ 23 ಕಥೆಗಳಲ್ಲಿ ತುಂಬಾ ಮನಸ್ಸಿಗೆ ತಾಗಿದ್ದು ಅಂದ್ರೆ 'ಸದಾಶಿವ ಲವ್ಸ್ ನೂತನ್'. ಇದನ್ನು ಜೋಗಿ ಬರೆದಿದ್ದಾರೆ ಅಂತಾಗಲೀ ಅಥವಾ ಅವರು ಇದರ ಸಂಪಾದಕರು ಅಂತಲ್ಲ. ಜೋಗಿ ಅವರನ್ನು ನಾವು ಮೆಚ್ಚಿ ದಶಕಗಳೇ ಕಳೆದಿವೆ. ಆದರೆ ಈ ಕತೆಯನ್ನು ವಿಶೇಷವಾಗಿ ಮೆಚ್ಚಲು ಕಾರಣ ಆ ಪುಟ್ಟ ಬೆಕ್ಕು ಮತ್ತು ನಮ್ಮಲ್ಲೂ ಮೂಡುವ ದ್ವಂದ್ವತೆ. ಅನಾಥ ಭಾವದ ಸದಾಶಿವ ಸಾಕುಬೆಕ್ಕಿನೊಡನೆ ಬೆಳೆಸಿಕೊಳ್ಳುವ ತಾಧ್ಯಾತ್ಮತೆ ಹೆಚ್ಚೋ ಅಥವಾ ಅವರ ಸೇಫ್ಟಿ ಮುಖ್ಯವೋ? ಎರಡ್ಮೂರು ದಿನ ಯೋಚಿಸಿದರೂ ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಷ್ಟರಮಟ್ಟಿಗೆ ಈ ಕತೆ ನನ್ನನ್ನು ಆವರಿಸಿಕೊಂಡಿದ್ದರಿಂದ ಈ ಕಥೆ ಮೊದಲನೆಯದಾಗಿ ನಿಲ್ಲುತ್ತದೆ. 

ಉಳಿದ ಲೇಖಕರ ಮೊದಲ ಪ್ರಯತ್ನ, ಇದು ಮೊದಲನೆಯದು ಎಂದು ಗೊತ್ತಾಗದಷ್ಟು ಹೊಸತನದಿಂದ ಕೂಡಿದೆ. ಹೊಸಕಥೆಗಳನ್ನು ಮುಕ್ತಮನಸ್ಸಿನಿಂದ ಇಷ್ಟಪಡುವ ಮತ್ತೊಂದಷ್ಟು ಜನರು ಸಿಕ್ಕರೆ ಅವರಿಗೆ ಈ ಪುಸ್ತಕ ಗಿಫ್ಟ್ ಮಾಡುವ ಆಶಯ ಇದೆ. ಹೊಸವರ್ಷದ ಮೊದಲ ದಿನ "ಮಳೆಯಲ್ಲಿ ನೆನೆದ ಕಥೆಗಳು" ಪುಸ್ತಕವನ್ನು ನನ್ನ ತಂಗಿಗೆ ಉಡುಗೊರೆಯಾಗಿ ನೀಡುತ್ತಾ ಇಡೀ ವರ್ಷ ಸೊಗಸಾಗಿರಲಿ ಎಂದು ಹಾರೈಸುತ್ತೇನೆ.

"ಕನ್ನಡ ಪುಸ್ತಕ ಕೊಂಡು ಓದಿ"

************

ಕೆ.ಎ.ಸೌಮ್ಯ, ಮೈಸೂರು

Popular posts from this blog

ಹೇಳಿ ಹೋಗು ಕಾರಣ By (ರವಿ ಬೆಳಗೆರೆ)

Parda & Polygami (Kannada)

ಮೃತ್ಯುಂಜಯ by ನಿರಂಜನ