Parda & Polygami (Kannada)
ಪುಸ್ತಕ ವಿಮರ್ಶೆ: "ಪರ್ದಾ ಮತ್ತು ಪಾಲಿಗಮಿ" ಮೂಲ ಲೇಖಕರು: ಇಕ್ಬಾಲುನ್ನೀಸಾ ಹುಸೇನ್ ಅನುವಾದಕರು: ದಾದಾಪೀರ್ ಜೈಮನ್ ಈ ಪುಸ್ತಕ ಓದಲು ಮುಖ್ಯವಾದ ಕಾರಣವೆಂದರೆ ಇದರ ಮುನ್ನುಡಿ ಬರೆದುಕೊಟ್ಟಿರುವ ಡಾ. ಸಿ.ಎನ್.ರಾಮಚಂದ್ರನ್ ಅವರ ಮಾತುಗಳು. ಅವರ ಮಾತುಗಳು ಈ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುತ್ತವೆ. ನಾನು ಮೂಲ ಇಂಗ್ಲೀಷ್ ಕಾದಂಬರಿ ಓದಿಲ್ಲ. ಹಾಗಾಗಿ ಅನುವಾದವೆಂದರೆ, ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವದ ಕಾದಂಬರಿ ಬಹುಶಃ ಡಾಕ್ಯುಮೆಂಟರಿ ಥರ ನೀರಸವಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಅನುವಾದಕರು ಎಷ್ಟು ಲವಲವಿಕೆಯಿಂದ ಅನುವಾದ ಮಾಡಿದ್ದಾರೆಂದರೆ ಓದುತ್ತಾ ಹೋದಂತೆ ನಮಗೆ ಇದು ಇಂಗ್ಲೀಷಿನ ಅನುವಾದ ಅಂತ ಮರೆತೇ ಹೋಗುತ್ತದೆ. ಅನುವಾದರು ಬಳಸುವ ಕನ್ನಡದ ಸಂಭಾಷಣೆ, ಸಂದರ್ಭಕ್ಕೆ ತಕ್ಕ ಹಾಸ್ಯ, ಆಗಾಗ ಬಳಸುವ ಉರ್ದು ಪದಗಳು ನಮಗೆ ಕಾದಂಬರಿಯನ್ನು ಮತ್ತಷ್ಟು ಆತ್ಮೀಯವಾಗಿಸುತ್ತದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳ ನಡುವೆ ನಡೆಯುವ ಸಂಭಾಷಣೆಯೇ ನನಗೆ ಬಹಳ ಇಷ್ಟವಾದುದು. ಅನುವಾದಕರೇ ಹೇಳುವಂತೆ "ಅನುವಾದ ಕೇವಲ ಭಾಷಾಂತರ ಕ್ರಿಯೆಯಲ್ಲ. ಅನುವಾದದಲ್ಲೂ ಮೂಲದ ಒಂದಿಷ್ಟು ಸೋರಿಹೋಗಿರುತ್ತದೆ. ಹಾಗೆಯೇ ಅದರಲ್ಲಿ ಮತ್ತೇನೋ ಹೊಸತು ದಕ್ಕಿಬಿಟ್ಟಿರುತ್ತದೆ". ಹೌದು... ಕೆಲವು ಸಂಭಾಷಣೆಗಳು ನಮ್ಮಲ್ಲಿ ಮಾತ್ರ ನಡೆಯುವಂಥವು. ಅದನ್ನೆಲ್ಲಾ ಗುರುತಿಟ್ಟುಕೊಂಡು ಎಲ್ಲಿ ಸೇರಿಸಬೇಕೋ ಅಲ್ಲಿ ಸೇರಿಸಿ ಸಮಯಪ್ರಜ್ಞೆ ತೋರಿ...