ಮಳೆಯಲ್ಲಿ ನೆನೆದ ಕಥೆಗಳು
(ವಿವಿಧ ಲೇಖಕರ ಕತೆಗಳ ಗುಚ್ಚ) ಕಥಾಗುಚ್ಛದ ಹೆಸರು 'ಮಳೆಯಲ್ಲಿ ನೆನೆದ ಕಥೆಗಳು'. ಅಂದರೆ ಮಳೆಯಲ್ಲಿ ನೆಂದಾಗ ನಮಗೆ ಆಹ್ಲಾದವಾಗುವುದಿಲ್ಲವೇ... ಈ ಕಥೆಗಳನ್ನು ಓದಿದಾಗ ನಮಗೆ ಅದೇ ರೀತಿ ಖುಷಿಯಾಗುತ್ತದೆ. ಏಕೆಂದರೆ ಇಲ್ಲಿನ ಕಥೆಗಳಲ್ಲಿ ಹೊಸತನವಿದೆ, ಲವಲವಿಕೆ ಇದೆ. ಕತೆಗಾರರು ಯಾವ ಮುಲಾಜಿಗೂ ಕಟ್ಟುಬೀಳದೇ ತಮಗನ್ನಿದಂತೆ ಸ್ವತಂತ್ರವಾಗಿ ಬರೆದಿದ್ದಾರೆ. ಈ ಹೊಸತನವೇ ನನಗೆ ಮಳೆಯಲ್ಲಿ ನೆಂದಷ್ಟು ಖುಷಿ ಕೊಟ್ಟಿದ್ದು. ಅದಕ್ಕಿಂತಲೂ ಖುಷಿ ತಂದವರು ಈ ಕಥೆಗಳನ್ನು ಆಯ್ಕೆ ಮಾಡಿರುವ ಸಂಪಾದಕರು. ಇಂತಹಾ ನವ್ಯ ರೀತಿಯ ಕಥೆಗಳನ್ನು ಗುರುತಿಸಿ, ಆಯ್ಕೆ ಮಾಡಿ, ನಮ್ಮವರೆಗೂ ತಲುಪಿಸಿದ ಅವರಿಗೆ ನಿಜಕ್ಕೂ ನಾನು ಕೃತಜ್ಞೆ. ಬಹಳ ಹೊಸತನದಿಂದ ಕೂಡಿರುವ ಈ ಕತೆಗಳಿಗೆ ಅವರು ಮನ್ನಣೆ ಕೊಟ್ಟಿರುವುದೇ ಖುಷಿ ತರುತ್ತದೆ. ಕಥಾಗುಚ್ಚ ತೆರೆದುಕೊಂಡ ನಂತರ ಮೊದಲು ಸಿಗುವ ಕಥೆ " ಪರಿಕಲಿತ ". ರಂಜನಿ ಕೀರ್ತಿ ಅವರ ಈ ಕತೆ ನಮ್ಮನ್ನು ಈ ಕಾಥಾಲೋಕಕ್ಕೆ ಎಳೆದುಕೊಳ್ಳಲು ಸಶಕ್ತವಾಗಿದೆ. ಮೊದಲ ಕತೆ ಹುಟ್ಟಿಸುವ ಭರವಸೆಯೇ, ಇಡೀ ಕಥೆಸಂಕಲನ ಓದಲು ಪ್ರೇರೇಪಿಸುತ್ತದೆ. ನಾವೆಲ್ಲಾ ಸಾಮಾನ್ಯದಲ್ಲಿ ಮತ್ತೊಬ್ಬರ ಜೀವನದಲ್ಲಿ ಏನು ಯೋಚಿಸುತ್ತೇವೆಯೋ, ಹಾಗೆ ನಮ್ಮ ದೃಷ್ಟಿಯಿಂದಲೇ ಕಥೆ ಮುನ್ನಡೆಸುತ್ತಾ, ಕೊನೆಗೆ ಕೊಡುವ ಷಾಕ್ ಇದೆಯಲ್ಲ..... 440 ವೋಲ್ಟಿಗಿಂತಲೂ ಹೆಚ್ಚು. ನಂತರದ ಕಥೆ ' ಮಾಂಕಾಳಿ '. ವಾಣಿ ಸುರೇಶ್ ಅವರ ಈ ಕತೆ ತಾಯಿಯರ ಜೀವನ...