ಹೇಳಿ ಹೋಗು ಕಾರಣ By (ರವಿ ಬೆಳಗೆರೆ)
ಪುಸ್ತಕ ವಿಮರ್ಶೆ ಹೀಗೆಯೇ ಇರಬೇಕು ಎಂಬ ನಿಯಮವಿದೆಯೇ? ಗೊತ್ತಿಲ್ಲ. ಆದರೆ ಒಂದು 'ಪುಸ್ತಕ' ಹೀಗೆಯೇ ಇರಬೇಕು ಎಂಬ ನಿಯಮ ಇರಲಿಕ್ಕಿಲ್ಲ. ಇಲ್ಲದಿದ್ದರೆ ಹಿಂದೆಂದೂ ಓದಿರದ 'ಹೊಸ ರೀತಿಯ' ಈ ಪುಸ್ತಕ ಇರುತ್ತಲೇ ಇರಲಿಲ್ಲ.
ಬೆನ್ನುಡಿ ಓದಿದರೆ ಇದು ಪ್ರೀತಿಸಿ ಮೋಸ ಮಾಡುವ (?) ಹುಡುಗಿಯ ಕಥೆ ಇರಬಹುದು ಎಂದೆನಿಸುತ್ತದೆ. ಮದುವೆಯಾಗಿ ಮಕ್ಕಳಿರುವ ನಾನು ಸಹ 'ಇದನ್ನು ಓದಿ ನಾನು ಮಾಡುವಂಥದ್ದೇನಿಲ್ಲ' ಅಂತಲೇ ಕಾಲ ಕಳೆಯುತ್ತಿದ್ದೆ. ಆದರೆ ಒಮ್ಮೆ ಅಕಸ್ಮಾತ್ತಾಗಿ ಈ ಪುಸ್ತಕ ಹಿಡಿದೆ.
ಕಂಡಿದ್ದು ಬೇರೆಯದೇ ಪ್ರಪಂಚ!!!
ಪುಸ್ತಕದಲ್ಲಿನ ಪ್ರತೀ ಬರಹದಲ್ಲಿಯೂ, ಪ್ರತೀ ಸಾಲಿನಲ್ಲಿಯೂ ಯಾವುದೋ ಒಂದು ಜೀವನಾನುಭವವಿದೆ. ಆ ಘಟನೆಗಳು ನಮಗೆ ಏನೋ ಸೂಚ್ಯವಾಗಿ ಹೇಳುತ್ತವೆ... ಒಬ್ಬನೇ ಮನುಷ್ಯನಿಗೆ ಇಷ್ಟೊಂದು ಪ್ರಪಂಚ ಜ್ಞಾನ ಇರಲು ಸಾಧ್ಯವಾ ಅಂತ ಗಾಬರಿಯಾಗುವಷ್ಟು ಪಾತ್ರ ಪ್ರಪಂಚ ದೊಡ್ಡದಿದೆ. ತನಗೆ ಗೊತ್ತಿರುವುದನ್ನು, ಹೇಳಿದ್ದನ್ನು, ಕೇಳಿದ್ದನ್ನು ಸಂದರ್ಭಕ್ಕೆ ತಕ್ಕಂತೆ ತನ್ನ ಬರಹದೊಳಗೆ ಇಳಿಸುವ ಚಾಕಚಕ್ಯತೆ ಲೇಖಕನಿಗೆ ಬೇಕಿರುತ್ತದೆ. ಅದು ಇವರಿಗೆ ಸಹಜವಾಗಿಯೇ ಸಿದ್ಧಿಸಿದೆ.
ಬರಹದ ಶೈಲಿ ಅಂತೂ... ಓದಿಯೇ ಸವಿಯಬೇಕು.
ಮೊದಲ ಬಾರಿ ಇದನ್ನು ಓದುತ್ತಿದ್ದಾಗ, ಬಹುಶಃ ಲೇಖಕರು ತಮಗೆ ಕಂಡ ಪ್ರತಿಯೊಂದನ್ನೂ ಈ ಕಥೆಯೊಳಗೆ ತಂದಿದ್ದಾರೆ ಅಂತಲೇ ಅಂದುಕೊಂಡಿದ್ದೆ. ಆದರೆ ಪುಸ್ತಕ ಮುಗಿದಾಗ ಗೊತ್ತಾಯ್ತು.... ಇಲ್ಲಿನ ಪ್ರತಿಯೊಂದು ಪಾತ್ರವನ್ನೂ ಚೆನ್ನಾಗಿ ಯೋಚಿಸಿಯೇ-ಯೋಜಿಸಿಯೇ ತರಲಾಗಿದೆ ಅಂತ.
ಬಹುದೊಡ್ಡ ಕಥಾವಸ್ತು ಇದು.
ಆದರೆ ಎಲ್ಲಿಯೂ ಅನಗತ್ಯವಾಗಿ ಎಳೆದು ಬೋರ್ ಮಾಡುವುದಿಲ್ಲ. ಇನ್ನೇನು ಪುಸ್ತಕ ಮುಗಿಯುವ ಹಂತದಲ್ಲಿದೆ ಎನ್ನುವಾಗ ಕೆಳಗಿಡಲು ಮನಸ್ಸೇ ಬರುವುದಿಲ್ಲ. 'ಮುಂದೇನಾಯ್ತು?' ಅಂತ ಈಗಲೇ-ಈ ಕೂಡಲೇ ತಿಳಿಯಲೇ ಬೇಕು ಅಂತ ಮನಸ್ಸು ಹಠ ಮಾಡುತ್ತದೆ. ಕಡೆಗೆ ಏನಾಗಿರಬಹುದೆಂದು ನಾನಾ ಥರ ಯೋಚಿಸಿ ನಮ್ಮ ಮನಸ್ಸು ಸುಸ್ತಾಗುತ್ತದೆ.
ಆದರೆ ನಾವು ಯೋಚಿಸುವುದೇ ಒಂದು.. ಅಲ್ಲಿ ಆಗುವುದೇ ಒಂದು...
ಹಾಗಾದರೆ ಒಂದೇ ಬಾರಿ ಓದಲಾಗುವುದಾ ಈ ಪುಸ್ತಕವನ್ನು......???
ಖಂಡಿತಾ ಇಲ್ಲ. ಇದೊಂದು ರೀತಿ ಪರ್ಸನಾಲಿಟಿ ಡೆವೆಲಪ್ಮೆಂಟ್‌ನ ಹಾಗಿರುವ ಕಥಾವಸ್ತು. ಇದರಲ್ಲಿರುವ ನಾನಾ ಪಾತ್ರಗಳು, ನಮಗೆ ನಾನಾ ರೀತಿಯ ಪ್ರಪಂಚವನ್ನು ಪರಿಚಯಿಸುತ್ತವೆ. ಪ್ರಾರ್ಥನಾ, ಊರ್ಮಿಳಾ, ಹಿಮವಂತ, ದೇಬ್, ರಸೂಲ್, ಸುಜಯ್ ಎಲ್ಲರೂ ಒಂದೊಂದು ಪಾಠ ಕಲಿಸುತ್ತಾರೆ.
ಈಗ ಕಥೆಯ ಕೊನೆಗೆ ಏನಾಗಬಹುದು ಎಂಬ ಕುತೂಹಲದಿಂದ ಅವಸರ-ಅವಸರವಾಗಿ ಓದಿದ್ದೆ. ಮತ್ತೊಮ್ಮೆ ಕುಳಿತು ನಿರಾಳವಾಗಿ ಓದಬೇಕಿದೆ. ಓದುತ್ತಾ ಪ್ರತೀ ಪಾತ್ರ ವಿಮರ್ಶೆಯಲ್ಲಿಯೂ ಕಳೆದುಹೋಗಬೇಕಿದೆ...
************
ಕೆ.ಎ.ಸೌಮ್ಯ
ಮೈಸೂರು
