Parda & Polygami (Kannada)

 


ಪುಸ್ತಕ ವಿಮರ್ಶೆ: "ಪರ್ದಾ ಮತ್ತು ಪಾಲಿಗಮಿ"
ಮೂಲ‌ ಲೇಖಕರು: ಇಕ್ಬಾಲುನ್ನೀಸಾ ಹುಸೇನ್
ಅನುವಾದಕರು: ದಾದಾಪೀರ್ ಜೈಮನ್

ಈ ಪುಸ್ತಕ ಓದಲು ಮುಖ್ಯವಾದ ಕಾರಣವೆಂದರೆ ಇದರ ಮುನ್ನುಡಿ ಬರೆದುಕೊಟ್ಟಿರುವ ಡಾ. ಸಿ.ಎನ್.ರಾಮಚಂದ್ರನ್ ಅವರ ಮಾತುಗಳು. ಅವರ ಮಾತುಗಳು ಈ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುತ್ತವೆ. ನಾನು ಮೂಲ ಇಂಗ್ಲೀಷ್ ಕಾದಂಬರಿ ಓದಿಲ್ಲ. ಹಾಗಾಗಿ ಅನುವಾದವೆಂದರೆ, ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವದ ಕಾದಂಬರಿ ಬಹುಶಃ ಡಾಕ್ಯುಮೆಂಟರಿ ಥರ ನೀರಸವಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಅನುವಾದಕರು ಎಷ್ಟು ಲವಲವಿಕೆಯಿಂದ ಅನುವಾದ ಮಾಡಿದ್ದಾರೆಂದರೆ ಓದುತ್ತಾ ಹೋದಂತೆ ನಮಗೆ ಇದು ಇಂಗ್ಲೀಷಿನ ಅನುವಾದ ಅಂತ ಮರೆತೇ ಹೋಗುತ್ತದೆ. ಅನುವಾದರು ಬಳಸುವ ಕನ್ನಡದ ಸಂಭಾಷಣೆ, ಸಂದರ್ಭಕ್ಕೆ ತಕ್ಕ ಹಾಸ್ಯ, ಆಗಾಗ ಬಳಸುವ ಉರ್ದು ಪದಗಳು ನಮಗೆ ಕಾದಂಬರಿಯನ್ನು ಮತ್ತಷ್ಟು ಆತ್ಮೀಯವಾಗಿಸುತ್ತದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳ ನಡುವೆ ನಡೆಯುವ ಸಂಭಾಷಣೆಯೇ ನನಗೆ ಬಹಳ ಇಷ್ಟವಾದುದು.

ಅನುವಾದಕರೇ ಹೇಳುವಂತೆ "ಅನುವಾದ ಕೇವಲ ಭಾಷಾಂತರ ಕ್ರಿಯೆಯಲ್ಲ. ಅನುವಾದದಲ್ಲೂ ಮೂಲದ ಒಂದಿಷ್ಟು ಸೋರಿಹೋಗಿರುತ್ತದೆ. ಹಾಗೆಯೇ ಅದರಲ್ಲಿ ಮತ್ತೇನೋ ಹೊಸತು ದಕ್ಕಿಬಿಟ್ಟಿರುತ್ತದೆ". ಹೌದು... ಕೆಲವು ಸಂಭಾಷಣೆಗಳು ನಮ್ಮಲ್ಲಿ ಮಾತ್ರ ನಡೆಯುವಂಥವು. ಅದನ್ನೆಲ್ಲಾ ಗುರುತಿಟ್ಟುಕೊಂಡು ಎಲ್ಲಿ ಸೇರಿಸಬೇಕೋ ಅಲ್ಲಿ ಸೇರಿಸಿ ಸಮಯಪ್ರಜ್ಞೆ ತೋರಿಸಿದ್ದಾರೆ ಅನುವಾದಕರು. ಅದರಿಂದಲೇ ಇಡೀ ಕಾದಂಬರಿ ಲವಲವಿಕೆಯಿಂದ ಕೂಡಿದೆ.

ಕಥಾವಸ್ತು ಬಹಳ ಆಳವಾದುದು.

ಮೂರು ತಲೆಮಾರಿನಲ್ಲಿ ನಡೆಯುವ ಕಥೆ ಇದು. ಆ ಮೂರು ತಲೆಮಾರಿಗೂ ಸೇರಿದ ಹೆಣ್ಣುಮಕ್ಕಳ ವ್ಯಥೆಯನ್ನು ಇಲ್ಲಿ ಸೆರೆ ಹಿಡಿಯಲಾಗಿದೆ. ಈ ಹೆಣ್ಣುಮಕ್ಕಳಲ್ಲಿ ಹೊರಗಿನ ಪ್ರಪಂಚ ತಿಳಿಯದ ಅಜ್ಞಾನಿಗಳೂ ಇದ್ದಾರೆ, ಓದಿದ ವಿದ್ಯಾವಂತರೂ ಇದ್ದಾರೆ, ಅನಕ್ಷರಸ್ತರೂ ಇದ್ದಾರೆ, ಮನೆಕೆಲಸ ಮಾತ್ರ ಬಲ್ಲವರೂ ಇದ್ದಾರೆ, ಹಾಗೆಯೇ ಕಸೂತಿ-ಹಾಡುಗಾರಿಕೆ ಬಲ್ಲ ಪ್ರತಿಭಾವಂತರೂ ಇದ್ದಾರೆ.

ಆದರೆ ಇವರೆಲ್ಲರ ಜೀವನ ಒಂದೇ ರೀತಿ ಸಾಗುತ್ತದೆ.

ಏಕೆಂದರೆ ಮದುವೆಯಾದ ನಂತರ ಆಕೆಯ ಏಕೈಕ ಗುರಿ ತನ್ನ ಗಂಡನನ್ನು ತೃಪ್ತಿಪಡಿಸುವುದೇ ಆಗಿರುತ್ತದೆ. ಅವಳ ಓದು, ಜ್ಞಾನ, ಪ್ರತಿಭೆ ಮೂಲೆ ಸೇರುತ್ತದೆ. ಅವಳಿಗೆ ಅಡುಗೆ ಮಾಡಲು, ಮನೆ ಸಂಭಾಳಿಸಲು ಬಂದರೆ ಆಯ್ತು. ಉಳಿದ ವಿದ್ಯೆಗಳು ಅಪ್ರಯೋಜಕ. ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಈ ರೀತಿ ಬದುಕಿದ್ದರು ಅಂತ ಕೇಳಿದರೆ ಆಘಾತವಾಗುತ್ತದೆ ಅಲ್ಲವೇ? ಆದರೆ ಅವರ ಪರಿಸ್ಥಿತಿ್ಳಗಳಿಗೆ ಅವರವರೇ ಕಾರಣರಾಗಿರುತ್ತಾರೆ.

ಮನೆಯ ಗಂಡಸರು ಆಚೆಗೆ ಹೋದ ಕೂಡಲೇ ಮನೆಯಲ್ಲಿ ಉಳಿಯುವವರು ಇದೇ ಹೆಂಗಸರು. ಅದು ಅತ್ತೆ ಇರಬಹುದು, ದೊಡ್ಡ ಸೊಸೆ ಇರಬಹುದು ಅಥವಾ ಮನೆಕೆಲಸದವಳು/ ಅಡುಗೆಯವಳಿರಬಹುದು. ಎಲ್ಲರೂ ಹೆಣ್ಣಾಗಿದ್ದರೂ ಸಹ ಎಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮತ್ತೊಬ್ಬ ಹೆಣ್ಣಿನ ಮೇಲೆ ಸವಾರಿ ಮಾಡಲು ಬಯಸುತ್ತಾರೆ. ಆ ಎಲ್ಲರೂ ತಾವು ಒಂದೇ ರೀತಿ ಶೋಷಣೆಗೆ ಒಳಪಟ್ಟಿದ್ದೇವೆ ಎಂದು ಎಲ್ಲರೂ ಒಗ್ಗಟ್ಟಾಗಿ ಇರಬಹುದಿತ್ತು. ಆದರೆ ಹಾಗಾಗುವುದಿಲ್ಲ.

ಇನ್ನು ಮನೆಯ ಗಂಡಸರೋ??

ಉಮರ್ ಅಂತೂ ಮಿತವ್ಯಯದ ಕಾರಣ ಒಬ್ಬಳೇ ಹೆಂಡತಿಯನ್ನು ಹೊಂದಿರುತ್ತಾನೆ. ಹಾಗಾಗಿ ಆತನಿಗೆ ಮಾನಸಿಕವಾಗಿಯಾದರೂ ಕೊಂಚ ನೆಮ್ಮದಿ ಅಂತಿರುತ್ತದೆ. ಆದರೆ ಆತನ ಮಗ ಕಬೀರ್ 'ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ' ಎನ್ನುವ ಹಾಗೆ ಯಾರದೋ ಮೇಲಿನ ಕೋಪಕ್ಕೆ ಒಂದಕ್ಕಿಂತ ಹೆಚ್ಚು ಮದುವೆಯಾಗಿ ಎಲ್ಲರನ್ನೂ ಏಕಕಾಲಕ್ಕೆ ಸಂಭಾಳಿಸಲಾಗದೇ ಬಸವಳಿಯುತ್ತಾನೆ. ಅತ್ತ ಕಡೆ ತಾಯಿಯನ್ನೂ ಗಮನಿಸಿಕೊಳ್ಳಬೇಕು, ಇತ್ತ ಕಡೆ ಮೂವರು ಹೆಂಡತಿಯರ ಬಳಿ ಇದ್ದಾಗಲೂ ಅವರವರೇ ಸರಿ ಎಂಬ ಮಾತುಗಳನ್ನಾಡಬೇಕು. ಮತ್ತೊಂದು ಕಡೆ ಮನೆಯ ವ್ಯವಹಾರಗಳನ್ನೂ ನೋಡಿಕೊಳ್ಳಬೇಕು. ಅಕಸ್ಮಾತ್ ಯಾರಿಗಾದರೂ ಕೊಂಚ ಪ್ರಾಮುಖ್ಯತೆ ಹೆಚ್ಚುಕೊಟ್ಟಂತೆ ಕಂಡರೆ ಉಳಿದವರ ಕೋಪವನ್ನೂ ಎದುರಿಸಬೇಕು.

ಈ ವಿಷಯದಲ್ಲಿ ಆತನ ತಂಗಿಯ ಗಂಡ ಹೇಳುವ ಮಾತು ಅಕ್ಷರಶಃ ಸತ್ಯವಾಗಿದೆ.

"ಒಂದು ವಿಷಯವನ್ನು ಯಾವುದೇ ಹಿಂಜರಿಕೆಯಿಲ್ಲದೇ ಹೇಳುತ್ತೇನೆ ಕಬೀರ್. ನಿನ್ನ ಜೀವನವನ್ನು ನೀನೇ ಅಸ್ತವ್ಯಸ್ತಗೊಳಿಸಿಕೊಂಡುಬಿಟ್ಟೆ. ನಿನ್ನ ಸಂತೋಷವನ್ನು ನೀನೇ ಹಾಳುಮಾಡಿಕೊಂಡುಬಿಟ್ಟೆ" ಅನ್ನುತ್ತಾನೆ ಅವನು. ಇದು ನಿಜ ಕೂಡ. ಇರುವುದರಲ್ಲಿಯೇ ಸಂತೃಪ್ತಿ ಕಾಣುವ ಬದಲು ಇನ್ನಷ್ಟು-ಮತ್ತಷ್ಟು ಪಡೆಯುವ ಮೂಲಕ ತನಗೇ ಗೊತ್ತಿಲ್ಲದೇ ಕಬೀರ್ ತನ್ನನ್ನು ಬಗೆಹರಿಸಿಕೊಳ್ಳಲಾಗದ ಸಮಸ್ಯೆಯೊಳಕ್ಕೆ ತಳ್ಳಿಕೊಳ್ಳುತ್ತಿರುತ್ತಾನೆ. ಕೊನೆಗೂ ಹೊರಬರಲಾರದೇ ಚಡಪಡಿಸುತ್ತಿರುತ್ತಾನೆ.

ಈ ಕಾದಂಬರಿಯಲ್ಲಿ ಮುಖ್ಯಪಾತ್ರಧಾರಿಗಳನ್ನು ಬಿಟ್ಟರೆ ಗಮನ ಸೆಳೆಯುವವರು ಕನ್ಯಾಪಿತೃಗಳು. ಒಬ್ಬ ತಂದೆ ಮಗಳ ಮದುವೆಯನ್ನು ಧಾಂ ಧೂಂ ಎಂದು ಮಾಡಿದರೂ, ಆಕೆಯ ಮುಂದಿನ ಜೀವನಕ್ಕೆ ಯಾವುದೇ ದಾರಿ ಮಾಡದೇ ಕೇವಲ ಮದುವೆಯನ್ನು ಮಾತ್ರ ವಿಜೃಂಭಣೆಯಿಂದ ಮಾಡಿರುತ್ತಾನೆ. ಅದೇ ಮತ್ತೊಬ್ಬ ತಂದೆ ಮಗಳಿಗೆ ಎಲ್ಲಾ ರೀತಿಯಿಂದಲೂ ಜೀವನಕ್ಕೆ ಭದ್ರತೆ ಮಾಡಿ, ಅಕಸ್ಮಾತ್ ಆಕೆ ಒಂಟಿಯಾದರೂ ಸಹ ಜೀವನ ನಿರ್ವಹಿಸುವ ರೀತಿ ವ್ಯವಸ್ಥೆ ಮಾಡಿರುತ್ತಾನೆ. ಈ ವಿಷಯ ಈಗಿನ ಕಾಲಕ್ಕೂ ಕನ್ಯಾಪಿತೃಗಳಿಗೆ ಅನ್ವಯಿಸುತ್ತದೆ.

ಓದುತ್ತಾ ಓದುತ್ತಾ ಇದು ನಮ್ಮ ಜೀವನದ ಕಥೆಯೇ ಅಂತನ್ನಿಸತೊಡಗುತ್ತದೆ ಎಲ್ಲರಿಗೂ. ಏಕೆಂದರೆ ಇದು ಮನಸ್ಸಿನ ಅಹಂಗೆ ಸಂಬಂಧಿಸಿದ್ದು. ಕಬೀರ್ ಅಷ್ಟು ಮದುವೆಯಾದದ್ದು ತನ್ನ ಅಹಂ ಅನ್ನು ತಣಿಸಲು. ಅತ್ತೆಯಾದವಳು ಸೊಸೆಯರ ಶೋಷಣೆ ಮಾಡುವುದೂ ಸಹ ತನ್ನ ಅಹಂ ತಣಿಸಿಕೊಳ್ಳಲು. ಮನುಷ್ಯನ ಅಹಂಕಾರಕ್ಕೆ ಯಾವ ಜಾತಿಯಿದೆ? ಯಾವ ಧರ್ಮವಿದೆ?

ಕಾದಂಬರಿ ಅಂತೂ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿನ ಸಂಭಾಷಣೆಗಳು ಓದುತ್ತಿದ್ದರೆ ಕಣ್ಮುಂದೆ ನಡೆದಂತೆ ಭಾಸವಾಗುತ್ತದೆ. ಕೆಲವೊಮ್ಮೆ ಹೊಟ್ಟೆ ಹಿಡಿದು ನಕ್ಕರೆ, ಕೆಲವೊಮ್ಮೆ ಕಣ್ಣಂಚಿನಲ್ಲಿ ನೀರು ತುಳುಕಿಸುತ್ತದೆ. ಮೂಲ ಲೇಖಕರು ಮತ್ತು ಅನುವಾದಕರು ಇಬ್ಬರಿಗೂ ನನ್ನ ಮನಃಪೂರ್ವಕ ಕೃತಜ್ಞತೆಗಳು.

ಈ ಕಾದಂಬರಿ ಕೈಯಲ್ಲಿ ಹಿಡಿಯಿರಿ ಮತ್ತು ಹೊಸ ಪ್ರಪಂಚಕ್ಕೆ ಕಾಲಿರಿಸಲು ಸಿದ್ಧರಾಗಿ.

**************
ಕೆ.ಎ.ಸೌಮ್ಯ
ಮೈಸೂರು




Popular posts from this blog

ಹೇಳಿ ಹೋಗು ಕಾರಣ By (ರವಿ ಬೆಳಗೆರೆ)

ಮೃತ್ಯುಂಜಯ by ನಿರಂಜನ