ಮೃತ್ಯುಂಜಯ by ನಿರಂಜನ
ಲೇಖಕರು : "ನಿರಂಜನ"
ಸಾಹಿತ್ಯ ಪ್ರಕಾರ: ಕಾದಂಬರಿ
(IBH ಪ್ರಕಾಶನ)
ನಮ್ಮ ದಿನನಿತ್ಯದ ಜೀವನದಲ್ಲಿ ಒಬ್ಬರಿಗೆ ಅನ್ಯಾಯವಾದಾಗ ಯಾರೂ ಪ್ರತಿಭಟಿಸುವುದೂ ಇಲ್ಲ, ಆ ಅನ್ಯಾಯವನ್ನು ಪ್ರಶ್ನಿಸುವುದೂ ಇಲ್ಲ. ಏಕೆಂದರೆ 'ದೊಡ್ಡವರನ್ನು ಪ್ರಶ್ನಿಸಬಾರದು' ಎಂಬ ಮನೋಭಾವವನ್ನು ಚಿಕ್ಕಂದಿನಿಂದಲೇ ನಮ್ಮಲ್ಲಿ ತುಂಬಲಾಗಿರುತ್ತದೆ. ಹಾಗಾಗಿ ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರ ಮಾತು ಪಾಲಿಸುತ್ತೇವೆ, ದೊಡ್ಡವರಾದಾಗ ದೇಶದ ದೊರೆಗಳ ಮಾತನ್ನು ಪಾಲಿಸುತ್ತೇವೆ.
ನಾಲ್ಕು ಜನರ ಕೈಲಿ 'ದೊಡ್ಡವರು' ಎನಿಸಿಕೊಳ್ಳಲು ಅರ್ಹತೆ ಬೇಕು. ಆದರೆ ಈ ಸಮಾಜದಲ್ಲಿ ದುಡ್ಡಿದ್ದವನೇ ದೊಡ್ಡಪ್ಪನಾಗಿದ್ದಾನೆ. ಹಣ ಮತ್ತು ಅಧಿಕಾರ ಇರುವವನ ಮಾತನ್ನು ಎಲ್ಲರೂ ಕೇಳುತ್ತಾರೆ. ಅವನ ಜೊತೆ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅದೇ ಹಣವಿಲ್ಲದವನ ಬಳಿ ಕರುಣೆಯಿಲ್ಲದೇ ವರ್ತಿಸುತ್ತಾರೆ.
ಇಂತಹಾ ಹಣದ ಮದದಿಂದ ಮೆರೆದ ಅಧಿಕಾರಶಾಹಿಗಳ ಕಥೆ ಇದು. ಅವರಿಗೆ ಹಣವೂ ಬೇಕು, ಅಧಿಕಾರವೂ ಬೇಕು, ಜೊತೆಗೆ ಪ್ರಜೆಗಳು ತಮ್ಮಾಜ್ಞೆಯಂತೆ ನಡೆಯಲೂ ಬೇಕು. ಅದಕ್ಕಾಗಿ ಅವರು ಭಕ್ತಿಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಜನರಲ್ಲಿ ಧಾರ್ಮಿಕ ಭಯ ತುಂಬಿ ಅವರನ್ನು ಅಂಧಕಾರದಲ್ಲಿಟ್ಟು ತಾವು ಮಜಾ ಮಾಡುತ್ತಿರುತ್ತಾರೆ.
ಇಂತಹಾ ದಮನಿತರ ನಡುವಿನಿಂದ ಒಬ್ಬ ನಾಯಕ ಉದಿಸಿ ಬರುತ್ತಾನೆ. ಆತನೇ ಮೆನೆಪ್‌ಟಾ....!! ಆತನಿಗೆ ನಾಡಿನ ಸಂಸ್ಕೃತಿಗಳ ಅರಿವಿಲ್ಲ, ಶಿಷ್ಟಾಚಾರ ಗೊತ್ತಿಲ್ಲ. ಗೊತ್ತಿರುವುದೊಂದೇ... ತಾನೂ ಎಲ್ಲರಂತೆ, ಎಲ್ಲರೊಳಗೊಬ್ಬ ಎನ್ನುವುದು ಮಾತ್ರ...
ನಿಜವಾದ ಪ್ರಜಾಪ್ರಭುತ್ವ ಎಂದರೆ ಇದು.
ಮೆನೆಪ್‌ಟಾ ತನ್ನ ಜನರಿಂದ ಆಯ್ಕೆಯಾದವನು. ಬುಡಕಟ್ಟು ನಾಯಕನಾಗಿದ್ದರೂ ಈಗಿರುವ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುತ್ತಾನೆ. ರಾಜಧಾನಿಗೆ ಬಲವಂತದ ಕಂದಾಯ ಕಟ್ಟುವ ವ್ಯವಸ್ಥೆಯನ್ನು ಬುಡಸಹಿತ ಕಿತ್ತೆಸೆದು ತನ್ನದೇ ಒಂದು ಹೊಸ ವ್ಯವಸ್ಥೆ ಮಾಡಿ, ತನ್ನ ಜನರ ತೆರಿಗೆ ಹಣ ಅವರವರಿಗೇ ಸದ್ಭಳಕೆಯಾಗುವಂತೆ ಯೋಜನೆ ರೂಪಿಸುತ್ತಾನೆ. ಆತನ 'ನೀರಾನೆ ಪ್ರಾಂತ್ಯ' ಸ್ವರ್ಗಕ್ಕೇ ಕಿಚ್ಚು ಹಚ್ಚುವಂತೆ ತಯಾರಾಗುತ್ತದೆ.
ಅಷ್ಟರಲ್ಲಿ ದೇಶದ ದೊರೆಯಿಂದ ಆತನಿಗೆ ಒಂದು ಕಾರ್ಯಕ್ರಮಕ್ಕೆ ಆಮಂತ್ರಣ ಬರುತ್ತದೆ. ಆ ಆಮಂತ್ರಣವನ್ನು ಮನ್ನಿಸಿ ರಾಜಧಾನಿಗೆ ಹೋದ ಮೆನೆಪ್‌ಟಾಗೆ ಅರಮನೆಯ ವತಿಯಿಂದ ಅಭೂತಪೂರ್ವ ಸ್ವಾಗತ ಸಿಗುತ್ತದೆ. ಪೆರೋರಿಂದ ಉಡುಗೊರೆಯೂ ದೊರೆಯುತ್ತದೆ. ಆದರೆ ಆತನ ಬಂಡಾಯಕ್ಕೆ ಕ್ಷಮಾಪಣೆ ದೊರೆಯುವುದೇ???
ಈ ಕಾದಂಬರಿ ಓದಿದ ನಂತರ ಅಧಿಕಾರಸ್ಥರ ಮೇಲಿರುವ ಜಿಗುಪ್ಸೆ ಮತ್ತಷ್ಟು ಹೆಚ್ಚುವುದರಲ್ಲಿ ಆಶ್ಚರ್ಯವೇನಿಲ್ಲ. ತನ್ನಲ್ಲಿ ಏನೂ ಇಲ್ಲದ ನಿರ್ಗತಿಕನೊಬ್ಬ, ತನ್ನಂತೆಯೇ ಇರುವ ಇನ್ನೊಬ್ಬ ನಿರ್ಗತಿಕನಿಗಾಗಿ ಮರುಗಿ ತನ್ನಲ್ಲಿರುವ ತುಂಡು ರೊಟ್ಟಿಯನ್ನು ಮತ್ತೊಬ್ಬನೊಡನೆ ಹಂಚಿ ತಿನ್ನುತ್ತಾನೆ. ಆದರೆ ಸಿರಿವಂತಿಕೆ ತುಂಬಿ ತುಳುಕುವ ಸಿರಿವಂತನಲ್ಲಿ ಇಂತಹಾ ಸಹಾನುಭೂತಿ ಮಾಯವಾಗಿರುತ್ತದೆ. ಆತನಿಗೆ ಕೇವಲ ತನ್ನ ಅಧಿಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿರುತ್ತದೆ.
ಈ ಕಾದಂಬರಿಯಲ್ಲಿ ಬರುವ ಪೆರೋ, ರಾಣಿ, ಮಹಾಅರ್ಚಕ, ಅಮಾತ್ಯ, ಸರು ಸಲಹೆಗಾರ, ಅರಮನೆಯ ಲಿಪಿಕಾರ ಎಲ್ಲರೂ ತಮ್ಮ ತಮ್ಮ ಆಟದ ಕಾಯಿಗಳನ್ನು ನಡೆಸುತ್ತಾರೆ. ಇದರಿಂದ ಮೆನೆಪ್‌ಟಾ ಬಾಳು ಬಂಗಾರವಾಯ್ತೋ ಅಥವಾ ಮಣ್ಣಾಯಿತೋ ಅಂತ ಓದಿಯೇ ತಿಳಿಯಬೇಕು.
ಮೊದಲ ಬಾರಿ ಈ ಪುಸ್ತಕ ಓದಿದಾಗ ಉಂಟಾದ ಹ್ಯಾಂಗ್ ಓವರಿನಿಂದ ಹೊರಬರಲು ಕನಿಷ್ಟ ಮೂರು ತಿಂಗಳು ಹಿಡಿಯಿತು. ದೇಶ ಬೇರೆ ಹೊರತೂ ಕಂದಾಯದ ಪದ್ಧತಿ ಎಲ್ಲೆಡೆ ಒಂದೇ. ನಂತರ ಮೆನೆಪ್ಟಾ ಪರಿಚಯಿಸುವ ಕಂದಾಯದ ವಿಧಾನ ನಿಜಕ್ಕೂ ನಮಗೆ ಇಷ್ಟವಾಗುತ್ತದೆ.
ಹಣವಂತರು ಅಥವಾ ಅಧಿಕಾರಸ್ಥರು ಏನು ಮಾಡಿದರೂ ಯಾರೂ ಕೇಳುವುದಿಲ್ಲ. ಲೋಕದ ಪದ್ಧತಿಯೇ ಇದು. ಆದರೆ ಉತ್ಸವ ನಡೆಯುವಾಗ ಮತ್ತು ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ಪೆರೋ ಸಹ ಆಯಾಸದಿಂದ ತೂಕಡಿಸಿದರು ಅಂತ ಓದಿದಾಗ, 'ರಾಜನೆಂದರೆ ದೇವರಲ್ಲ, ಅವರೂ ನಮ್ಮಂತೆಯೇ ಮನುಷ್ಯರು' ಅಂತನ್ನಿಸಿ ನಗು ಬರುತ್ತದೆ.
ಎಲ್ಲಿಯೂ ಕಂಡಿಲ್ಲದ, ಕೇಳಿಲ್ಲದ ಪಾತ್ರಗಳನ್ನು ಒಂದರೊಳಗೊಂದು ಬೆಸೆದು, ಅವುಗಳಿಗೆ ಸಂಬಂಧಗಳನ್ನು ಬೆರೆಸಿ, ಅವುಗಳ ನಡುವೆ ಸಂಭಾಷಣೆ ಹುಟ್ಟಿಸಿ ಕಥೆ ಮುನ್ನಡೆಸುವ ರೀತಿ ಅನನ್ಯವಾದುದು. ನಿಜಕ್ಕೂ ನಿರಂಜನ ಅವರ "ಮೃತ್ಯುಂಜಯ" ಅದ್ಭುತ ಸೃಷ್ಟಿ.
ಅಪಾರವಾದ ಪಾತ್ರಗಳಿದ್ದರೂ ಓದುತ್ತಾ ಹೋದಂತೆ ಅರ್ಥವಾಗುತ್ತಾ ಹೋಗುತ್ತದೆ. ಒಮ್ಮೆ ಓದಿದೆವೆಂದರೆ ನಮ್ಮೊಳಗೂ ಒಂದು ತಣ್ಣನೆಯ ಪ್ರತಿಭಟನೆಯ ಕಾವು ಹೊತ್ತಿಕೊಳ್ಳುತ್ತದೆ.
*********
ಕೆ.ಎ.ಸೌಮ್ಯ
ಮೈಸೂರು
