"ಕರ್ಮ" By ಕರಣಂ ಪವನ್ ಪ್ರಸಾದ್
ಲೇಖಕರು: ಕರಣಂ ಪವನ ಪ್ರಸಾದ್
ಯಾವ ಕರ್ಮ? ಅದು ಅಪರ ಕರ್ಮ. ಆಡುಭಾಷೆಯಲ್ಲಿ ತಿಥಿ ಎನ್ನಲಾಗುತ್ತದೆ. ಆದರೆ ವೈದಿಕರು ಆ ಪದವನ್ನು ಬಳಸದೇ ಕರ್ಮ ಅಥವಾ ಕಾರ್ಯ ಎಂದೇ ಹೇಳುತ್ತಾರೆ. ಹಾಗಾಗಿ "ಕರ್ಮ" ಎಂದರೆ ಕ್ರಿಯೆಯಲ್ಲ... ಆ ಕ್ರಿಯೆಯ ಕಾರ್ಯ.
ಕಾಲ ಬದಲಾಗುತ್ತಿದ್ದಂತೆ ಮನುಷ್ಯ ತಾನೂ ಸಹ ಕಾಲದೊಂದಿಗೆ ಬದಲಾಗುತ್ತಾ ಬರುತ್ತಾನೆ. ಅವನ ಸೌಕರ್ಯ ಹೆಚ್ಚಿದಂತೆಲ್ಲಾ ಆತ ಸೋಮಾರಿಯಾಗುತ್ತಾನೆ. ಅತೀ ಅವಶ್ಯಕತೆ ಇರದ ಹೊರತೂ ಕಷ್ಟದ ಕಾರ್ಯಗಳಲ್ಲಿ ಆತ ತೊಡಗಲಾರ. ಇದೂ ಹಾಗೆಯೇ.... ಬೆಂಗಳೂರಿನ ಐಟಿ-ಬಿಟಿ ಸಂಸ್ಕೃತಿಗೆ ಒಗ್ಗಿ ಹೋಗಿರುವ ಕಥಾನಾಯಕನಿಗೆ ಹದಿಮೂರು ದಿನಗಳ ಶ್ರಾದ್ಧ ಮಾಡು ಅಂದರೆ ಹೇಗೆ ಸಾಧ್ಯ?
ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ.
ಆದರೆ ಶ್ರದ್ಧೆಯೆಲ್ಲಿದೆ? ತಾಳ್ಮೆಯಲ್ಲಿದೆ.. ತಾಳ್ಮೆ ಎಲ್ಲಿದೆ? ಅದು ಸತ್ತು ಹೋಗಿದೆ... ಟ್ರಾಫಿಕ್ಕಿನಲ್ಲಿ ನೂರಿಪ್ಪತ್ತು ಸೆಕೆಂಡಿನಷ್ಟು ಕಾಯಲಾಗದ ಆತುರಗಾರರು ನಾವು.. ಇನ್ನು ಕಂಡು ಕೇಳರಿಯದ ಭಾಷೆಯ ಮಂತ್ರೋಚ್ಛಾರಣೆಯ ಶ್ರಾದ್ಧದ ಕಾರ್ಯ ಮಾಡಲು ತಾಳ್ಮೆ ಇರುವುದೇ?
ಅದಕ್ಕಾಗಿಯೇ ಕಥಾನಾಯಕ ನಮಗಿಷ್ಟವಾಗುತ್ತಾನೆ.
ನಾವೂ ಅವನಂತೆ ಯೋಚಿಸುತ್ತೇವಲ್ಲ... ಹಾಗಾಗಿ ಕಥೆ ಓದುವಾಗ ಅವನ ದೃಷ್ಟಿಕೋನ ಸರಿ ಅಂತಲೇ ಅನ್ನಿಸುತ್ತದೆ. ಅಲ್ಲದೇ ಆತನ ಹೆಂಡತಿ... ಅವಳು ಸಹ ಮಾಡರ್ನ್ ಗರ್ಲ್.. ಬೆಂಗಳೂರಿನ ಬಹುತೇಕರು ಜಾತಿ-ಸಂಪ್ರದಾಯವಿಲ್ಲದೇ ಒಂದು ಮೆಟ್ರೋಪಾಲಿಟನ್ ಸಂಸ್ಕೃತಿ ಬಾಳುತ್ತಿದ್ದಾರೆ. ಹಾಗಾಗಿ ಆಕೆಯೂ ನಮಗೆ ಸರಿ ಎನ್ನಿಸತೊಡಗುತ್ತಾಳೆ. ಒಂದು ಕಥೆ ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳಲು ಮತ್ತೇನು ಬೇಕು?
ತಿಥಿ ಕಾರ್ಯಗಳಲ್ಲಿ ಯಾವ ಯಾವ ಕರ್ಮ ಮಾಡಿಸುತ್ತಾರೆ ಅಂತ ದೇವರಾಣೆ ನನಗೆ ಗೊತ್ತಿರಲಿಲ್ಲ. ಹೆಣ್ಣುಮಕ್ಕಳಿಗೆ ಅದು ಗೊತ್ತಾಗುವುದೂ ಇಲ್ಲ ಬಿಡಿ. ಆದರೆ ಈ ಕೃತಿಯಲ್ಲಿ ಎಲ್ಲವೂ ಸವಿಸ್ತಾರವಾಗಿದೆ. ಯಾವ ದಿನ ಯಾವ ಕಾರ್ಯ, ಅದರ ವಿವರಗಳಿವೆ ಎಂದ ಮಾತ್ರಕ್ಕೆ ಬೋರ್ ಹೊಡೆಸುತ್ತದೆ ಅಂತಲ್ಲ. ಎಲ್ಲಿ ಯಾವ ಸಂದರ್ಭ ಬಳಸಿ ಬರೆಯಬೇಕು ಅಂತ ಲೇಖಕರಿಗೆ ಗೊತ್ತಿದೆ. ಹಾಗಾಗಿ ಇಡೀ ಕಾದಂಬರಿ ಶ್ರಾದ್ಧದ, ಸಂಪ್ರದಾಯದ ಕುರಿತಾಗಿಯೇ ಆಗಿದ್ದರೂ ಎಲ್ಲಿಯೂ ಬೇಸರವಾಗೋಲ್ಲ.
ಆದರೆ ಕಾದಂಬರಿಯ ಕೊನೆಯಲ್ಲಿ ಒಂದು ಪವರ್ಫುಲ್ ಷಾಕ್ ಇದೆ!!!
ಕಣ್ಮುಂದೆ ಕಾಣುವುದಷ್ಟೇ ಸತ್ಯ ಅಂತ ನಾವು ತಿಳಿದಿರುತ್ತೇವೆ. ಆದರೆ ಕಾಣದ ಸತ್ಯ ಎಷ್ಟೋ ಇರುತ್ತದೆ. ನಮಗೆ ಕಾಣಲಿಲ್ಲ ಎಂದ ಮಾತ್ರಕ್ಕೆ ಆ ಸತ್ಯ ಇಲ್ಲ ಎಂದರ್ಥವಲ್ಲ. ಒಂದಲ್ಲ ಒಂದು ದಿನ ಆ ಸತ್ಯ ಕಣ್ಮುಂದೆ ಬಂದಾಗ, ಇದುವರೆಗೂ ನಾವು ಅಂದುಕೊಂಡಿದ್ದೆಲ್ಲ ಬುಡಮೇಲಾದಾಗ ಆಗುವ ಆಘಾತ ವರ್ಣಿಸಲಾಗೋಲ್ಲ.... ಕಥಾನಾಯಕನ ಜೊತೆ ನಾವೂ ಸಹ ಆ ಆಘಾತಕ್ಕೆ ಒಳಗಾಗುತ್ತೇವೆ..
ಉಳಿದಂತೆ ನನಗೆ ಬಹಳ ಇಷ್ಟವಾದ ಅಂಶವೆಂದರೆ, ಇಡೀ ಕಾದಂಬರಿಯ ನಿರೂಪಣೆ. ನನ್ನ ಮನೆಯ ಕಥೆಯನ್ನೇ ಹೇಳಿದಂತಿತ್ತು. ಸಿಟಿಗಳಲ್ಲಿ ನಮ್ಮ ಮನೆ, ನಮ್ಮ ರೂಮ್, ರೂಮೊಳಗಿನ ಟಾಯ್ಲೆಟ್ ಅಂತ ಪ್ರೈವೇಟಾಗಿ ಬದುಕುತ್ತಿರುವ ನಮಗೆ ಒಂದು ಕಾರ್ಯಕ್ರಮದಲ್ಲಿ ಬಂಧುಗಳೆಲ್ಲರೂ ಒಂದೇ ಕಡೆ ಸೇರಿದಾಗ ಆ ಪ್ರೈವೆಸಿ ಹಾರಿಹೋಗುವುದರ ನೈಜ ಚಿತ್ರಣವಿದೆ. ಅವರ ರೂಮಿನಲ್ಲಿ ಇವರು ಬ್ಯಾಗಿಡುವುದು, ಆಗ ಅವರ ಕಣ್ಣು ಕೆಂಪಾಗುವುದು, ಒಂದು ಲೋಟ ನೀರು ಕೇಳಲು ಬಂದರೂ ಎಲ್ಲರೂ ಆಕೆಯತ್ತ ತಿರುಗುವುದು, ಆಕೆ ಊರ ಹೊರಗೆ ಹೋಗಿ ಸಿಗರೇಟ್ ಸೇದಿ ಬಂದರೂ ಅದನ್ನು ಮತ್ಯಾರೋ ಚಾಡಿ ಹೇಳುವುದು,ಊಟ-ತಿಂಡಿ-ಕಾಫಿ ಎಲ್ಲ ವಿಚಾರದಲ್ಲಿಯೂ ನಮ್ಮ ಜೀವನದ್ದೇ ಸಂಗತಿ ಎನ್ನಿಸುವಷ್ಟು ಆಪ್ತವಾಗಿದೆ.
ನಾವೆಷ್ಟೇ ಶ್ರೀಮಂತರಾಗಿರಬಹುದು, ಎಷ್ಟೇ ದೌಲತ್ತಿನಿಂದ ಜೀವನ ನಡೆಸುತ್ತಿರಬಹುದು...ಒಂದೆಡೆ ಸೇರಿದ ನೆಂಟರ ಮುಂದೆ ಕುರಿಗಳೇ ಅಂತ ತಿಳಿಯುತ್ತದೆ.. 😂😂 ಅದು ನಿಜವೂ ಸಹ.. ಆ ಗುಂಪಿನ ಮುಂದೆ ನಮ್ಮತನ ಮರೆತು ಅವರು ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತೇವೆ. ಥೇಟ್ ಕಥಾನಾಯಕನ ಹಾಗೆ..
ಕಾದಂಬರಿಯ ಜೀವಾಳವೇ ಅದರ ನಿರೂಪಣೆ, ಭಾಷಾಬಳಕೆ ಮತ್ತು ಸಂದರ್ಭಗಳ ವಿವರಣೆ. ಕಣ್ಮುಂದೆ ನಡೆದಷ್ಟು ಸೊಗಸಾದ ಕೃತಿ. ಓದಿಯೇ ಸವಿಯಬೇಕು. ಇದೇನು ತಿಥಿಯ ಕೃತಿಯನ್ನು ಸವಿಯಬೇಕಾ ಎನ್ನಬೇಡಿ.. ಓದಿ ನೋಡಿ 🙏
ವಂದನೆಗಳು.
***************
ಕೆ.ಎ.ಸೌಮ್ಯ
ಮೈಸೂರು
