ಅವಳ ಮನೆ by ತ್ರಿವೇಣಿ

 



ಹೆಣ್ಣುಮಕ್ಕಳಿಗೆ ಇದೊಂದು ಪ್ರಶ್ನೆ ಸದಾ ಕಾಡುತ್ತದೆ. "ನನ್ನ ಮನೆ ಯಾವುದು?" ಎನ್ನುವುದು. ಏಕೆಂದರೆ ಹುಟ್ಟಿದಾಗಿನಿಂದಲೇ ಆಕೆಯ ತಲೆಗೆ 'ಅವಳು ಬೇರೆ ಮನೆಗೆ ಸೇರುವವಳು' ಅಂತಲೇ ತಲೆಗೆ ತುಂಬಿ ಬೆಳೆಸಲಾಗುತ್ತಿರುತ್ತದೆ. ಹಾಗಾಗಿ ಪ್ರತೀ ಹೆಣ್ಣಿಗೆ ಎರಡು ಮನೆಗಳಿರುತ್ತವೆ; ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆ ಎಂದುಕೊಳ್ಳಬಹುದು.

ಆದರೆ ಕಥಾನಾಯಕಿ ಸರೋಜಿಗೆ ಬಂಪರ್ ಎಂಬಂತೆ ಮತ್ತೊಂದು ಮನೆ ಸಿಗುತ್ತದೆ. ಆದರೆ ಈ ಮನೆಗಳು ಅವಳ ಮನಸ್ಸು ತುಂಬುವುದಿಲ್ಲ.

ಹುಟ್ಟಿದ ಮನೆಯಲ್ಲಿ ಬಡತನದ ಕಾರಣದಿಂದ ಅವಳನ್ನು ಒಂದು ಶ್ರೀಮಂತ ಕುಟುಂಬಕ್ಕೆ ಸಾಕಲು ಕೊಡಲಾಗುತ್ತದೆ. ಆ ವೇಳೆಗಾಗಲೇ ಏಳೆಂಟು ವರ್ಷ ವಯಸ್ಸಾಗಿದ್ದ ಆಕೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವಷ್ಟು ಮನಸ್ಥಿತಿ ಹೊಂದಿರುತ್ತಾಳೆ. ಇದುವರೆಗೂ ತಾನು ಬೆಳೆದು ಬಂದ ವಾತಾವರಣಕ್ಕೂ, ಈಗ ದಿಢೀರನೇ ಎದುರಾಗಿರುವ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದರೂ ಪ್ರಬುದ್ಧೆಯಾದ ಆಕೆ ಬಹುಬೇಗ ಎಲ್ಲವನ್ನೂ ಕಲಿಯುತ್ತಾಳೆ. ಆದರೆ ತಾನು ಆ ಶ್ರೀಮಂತರ ಮನೆಗೆ ಸೇರಿದವಳಲ್ಲ ಎಂಬ ಅರಿವು ಅವಳಲ್ಲಿ ಇದ್ದೇ ಇರುತ್ತದೆ.

ಹಾಗಾಗಿ ಹಳೆಯದನ್ನು ನೆನೆಸಿಕೊಳ್ಳುತ್ತಾ ಹೊಸ ಕುಟುಂಬದಲ್ಲಿಯೂ ಹೊಂದಿಕೊಳ್ಳದೇ, ಅಪರೂಪಕ್ಕೆ ತವರಿಗೆ ಬಂದಾಗ ಇಲ್ಲಿಗೂ ಹೊಂದಿಕೊಳ್ಳಲಾಗದೇ ಪರದಾಡುತ್ತಾಳೆ. ಶ್ರೀಮಂತರ ಕುಟುಂಬಕ್ಕೆ ಬಂದಾಗ ಅಪ್ಪ-ಅಮ್ಮ-ಜೊತೆಯಲ್ಲಿ ಹುಟ್ಟಿದವರನ್ನು ನೆನೆದು ದುಃಖಿಸಿದರೆ, ತವರಿಗೆ ಹೋದಾಗ ತನ್ನ ಶ್ರೀಮಂತಿಕೆಯ ಕಾರಣ ತವರಿನವರೇ ದೂರ ಮಾಡುತ್ತಿದ್ದಾರೆ ಎಂದು ನೊಂದುಕೊಳ್ಳುತ್ತಾಳೆ.

ತವರಿನವರು 'ಅವಳಿಗೇನು ಕಡಿಮೆ, ಹೊತ್ತುಹೊತ್ತಿಗೆ ಊಟ-ಉಡಲು ರೇಷ್ಮೆ ವಸ್ತ್ರವಿದೆಯಲ್ಲ' ಎಂದು ತಾತ್ಸಾರ ತೋರಿದರೆ, ಸಾಕು ಮನೆಯವರು 'ತಾವು ಸಾಕುವಾಗ ಅವಳಿಗೇನು ಕೊರತೆ ಮಾಡಿಲ್ಲ, ಹಾಗಾಗಿ ಆಕೆ ಖುಷಿಯಾಗಿದ್ದಾಳೆ' ಎಂಬ ಭಾವನೆಯಲ್ಲಿರುತ್ತಾರೆ. ಒಟ್ಟಿನಲ್ಲಿ ಅವಳ ಮನದ ಮಾತು ಯಾರಿಗೂ ಬೇಕಾಗಿರುವುದಿಲ್ಲ.

ಆ ಮನೆಯೂ ತನ್ನದಲ್ಲ, ಈ ಮನೆಯೂ ತನ್ನದಲ್ಲ... ಹಾಗಾದರೆ ನನ್ನ ಮನೆ ಯಾವುದು ಅಂತ ಅವಳು ಯೋಚಿಸುತ್ತಿರುವಾಗ ಕಥಾನಾಯಕನ ಪ್ರವೇಶವಾಗುತ್ತದೆ. ಆದರೆ ಆತನನ್ನು ಮದುವೆಯಾಗಲು ಸಮಾಜ, ಸ್ಟೇಟಸ್ ಬಿಡುವುದಿಲ್ಲ. ಈ ಕುರಿತು ಅವಳು ಸಲಹೆ ಕೇಳಿದಾಗ ಹೆತ್ತವರು ಅವಳನ್ನು ಸಾಕಲು ಮತ್ತೊಬ್ಬರಿಗೆ ಕೊಟ್ಟಾಗಲೇ ತಮ್ಮ ಕರ್ತವ್ಯ ಮುಗಿಯಿತೆಂದು ಕೈ ಚೆಲ್ಲಿದರೆ, ಸಾಕಿದವರು ತಾವು ಹೇಳಿದವನನ್ನೇ ಆಕೆ ಮದುವೆಯಾಗಬೇಕೆಂದು ದರ್ಪ ತೋರುತ್ತಾರೆ. ಸಕಲವನ್ನೂ ದುಡ್ಡು-ಆಸ್ತಿಯಿಂದಲೇ ಅಳೆಯುವವರಿಗೆ ಮನಸ್ಸಿನ ಮಾತು ಅರ್ಥ ಆಗುವುದಾದರೂ ಹೇಗೆ?

ಕಡೆಗೆ ಕಥಾನಾಯಕಿ "ಅವಳ ಮನೆ" ಗೆ ಹೋದಳೇ..? ಎಂಬುದೇ ಕಾದಂಬರಿಯ ವಿಷಯ.

**********

ಕನ್ನಡ ಲೋಕ ದವರಿಂದ ತ್ರಿವೇಣಿಯವರ ಹದಿನೇಳು ಪುಸ್ತಕ ತರಿಸಿದಾಗ ನನ್ನ ಅಮ್ಮ ದಿನಕ್ಕೊಂದು ಪುಸ್ತಕದಂತೆ ಓದಿ ಮುಗಿಸತೊಡಗಿದರು. ಅಂಥದ್ದೇನಿದೆ ಇದರಲ್ಲಿ ಅಂತ ಮೊದಲ ಪುಸ್ತಕ ಹಿಡಿದಾಗ ಬಿಡಲೇ ಮನಸ್ಸಾಗಲಿಲ್ಲ. ಹಿಂದಿನ ಕಾಲದಲ್ಲಿ ಪುಸ್ತಕ ಓದುತ್ತಾ ಗೃಹಿಣಿಯರು ಅಡುಗೆ ಮಾಡದೇ, ಊಟಕ್ಕೆ ಬಡಿಸದೇ ಓದಿನಲ್ಲಿ ತಲ್ಲೀನರಾಗುತ್ತಿದ್ದರು ಎಂಬ ಮಾತುಗಳಿಗೆ ಉತ್ಪ್ರೇಕ್ಷೆಯಿಲ್ಲ. ಕಾದಂಬರಿ ಅಷ್ಟು ಸೊಗಸಾಗಿದೆ. ಅದರ ಸಂಭಾಷಣೆಯಾಗಲೀ, ಸಂದರ್ಭವಾಗಲೀ ಓದಿಯೇ ಅರಿಯಬೇಕು. ತ್ರಿವೇಣಿಯವರು ಕನ್ನಡ ಓದುಗರಿಗೆ ಮಾಡಿರುವ ಮೋಡಿಯನ್ನು ಇಂದು ಕಣ್ಣಾರೆ ನೋಡಿ ಅನುಭವಿಸಿದೆ. 

ಪುಸ್ತಕ ಓದಿ ಏನೋ ಒಂದು ರೀತಿ ಮನಸ್ಸು ನಿರಾಳವಾಯ್ತು...

************
ಕೆ.ಎ.ಸೌಮ್ಯ
ಮೈಸೂರು

Popular posts from this blog

ಹೇಳಿ ಹೋಗು ಕಾರಣ By (ರವಿ ಬೆಳಗೆರೆ)

Parda & Polygami (Kannada)

ಮೃತ್ಯುಂಜಯ by ನಿರಂಜನ