ಘಾಚರ್ ಘೋಚರ್ by ವಿವೇಕ್ ಶಾನಭಾಗ್


ಲೇಖಕರು: ವಿವೇಕ್ ಶಾನಭಾಗ

ಹಾಗೆಂದರೇನು? ಘಾಚರ್ ಘೋಚರ್ ಎಂದರೆ? ಉಹುಂ... ಅದನ್ನು ತಿಳಿಯಬೇಕೆಂದರೆ ಪೂರ್ತಿ ಕಥೆ ಓದಬೇಕು. ಓದಿದ ನಂತರ ನಾವೂ ಸಹ ಕೆಲವು ಸಂದರ್ಭಗಳಲ್ಲಿ 'ಘಾಚರ್-ಘೋಚರ್' ಅಂತ ಬಳಸಲು ಶುರುಮಾಡಿಬಿಡುವ ಚಾನ್ಸಿದೆ.

ಆದರೆ ನಾನು ಇದುವರೆಗೂ ಈ ಪುಸ್ತಕ ಓದಿಲ್ಲದೇ ಇದ್ದುದಕ್ಕೆ ಕಾರಣವೇ ಇದರ 'ಶೀರ್ಷಿಕೆ'. ಆದರೆ ಓದಿದ ನಂತರ, ಈಗ ವಿವೇಕ ಶಾನುಭಾಗ ಅವರ ಬರಹಕ್ಕೆ ಸಂಪೂರ್ಣ ಮನಸೋತಿದ್ದೇನೆ. ಆ ರೀತಿ ಬರಹಕ್ಕೆ ಮನಸೋಲುವಂತೆ ಮಾಡುವ ಅಂಶಗಳಿವೆ ಇದರಲ್ಲಿ.

ಭೂಮಿಯ ಮೇಲೆ ಆರುನೂರಾ ಮೂವತ್ತು ಕೋಟಿ ಜನರಿದ್ದೇವೆ. ಒಬ್ಬೊಬ್ಬರದು ಒಂದೊಂದು ಮನಸ್ಥಿತಿ. ನಮಗೆ ಎಲ್ಲರ ಮನಸ್ಸಿನೊಳಗೆ ಹೊಕ್ಕು ಅವರ ಮನಸ್ಸುಗಳನ್ನು ತಿಳಿಯಲು ಬರುವುದಿಲ್ಲ ಅಲ್ವೇ? ಅದಕ್ಕೆ ಹಿರಿಯರು "ದೇಶ ಸುತ್ತಿ ನೋಡು: ಕೋಶ ಓದಿ ನೋಡು" ಅಂತ ಗಾದೆ ಮಾಡಿರುವುದು.

ಈ ಪುಸ್ತಕ ಓದಿದರೆ 'ಕೋಶ' ಓದಿದಂತೆಯೇ, ನಮಗೆ ಒಮ್ಮೆಲೇ ಹಲವು ವ್ಯಕ್ತಿತ್ವಗಳ ಪರಿಚಯವಾಗುತ್ತದೆ. ಅಷ್ಟಾಗಿ ಜನರನ್ನು ಸೇರದ ನನ್ನಂಥವಳಿಗೂ ಸಹ, ನಮ್ಮೆದುರಿನ ಜನರ ಮನಸ್ಸಿನೊಳಗೆ ಏನು ನಡೆಯುತ್ತಿರಬಹುದು ಎಂಬ ಊಹೆ ಮಾಡುವ ಶಕ್ತಿ ನೀಡುತ್ತದೆ ಈ ಪುಸ್ತಕ.

ನಮ್ಮ ಜೀವನದಲ್ಲಿ ನಮಗೆ ಎಲ್ಲಾ ಅನುಭವಗಳೂ ಆಗಲೇಬೇಕು ಅಂತಿಲ್ಲ. ಯಾರೋ ಅಪರಿಚಿತ ಹೆಂಗಸು ದಿಢೀರನೆ ಮನೆಯೊಳಗೆ ನುಗ್ಗಿ ಮನೆ ಯಜಮಾನನೊಡನೆ ತನಗೆ ಆಪ್ತತೆಯಿದೆ ಅಂತ ಪ್ರಕಟಿಸಿದರೆ ಆ ಮನೆಯವರು ಹೇಗೆ ಪ್ರತಿಕ್ರಿಯಿಸಬಹುದು? ಯಾರೋ ಸಾಲ ಮರುಪಾವತಿಗೆ ಬಂದಾಗಲೇ ಅದು ಅಕ್ಕಪಕ್ಕದವರಿಗೆ ತಿಳಿಯದಂತೆ ಪರದಾಡುವ ಜನ, ಒಮ್ಮೆಲೇ‌ ಎದುರಾದ ಅನೈತಿಕ ಸಂಬಂಧದ ಪ್ರಕಟಣೆಯಿಂದ ಎಷ್ಟು ಕಂಗೆಡಬಹುದು?

ಇಲ್ಲಿ ಲೇಖಕರು ಯಾವ ಪಾತ್ರಕ್ಕೂ ಅನ್ಯಾಯವಾಗದಂತೆ, ಪ್ರತಿಯೊಂದು ಪಾತ್ರದ ಒಳಹೊಕ್ಕು ಚಿತ್ರಿಸಿದ್ದಾರೆ. ಎಲ್ಲಾ ಪಾತ್ರಗಳೂ ತಮಗೆ ಸರಿ ಅನ್ನಿಸಿದ್ದನ್ನು ಮಾಡುತ್ತವೆ. ಅವೆಲ್ಲವೂ ನಮಗೂ ಸರಿ ಅನ್ನಿಸುವುದೇ ಇಲ್ಲಿನ ವಿಶೇಷ. ಅದನ್ನು ತಪ್ಪು ಅಂತ ನಮ್ಮಿಂದಲೂ ಹೇಳಲಾಗೋಲ್ಲ. ಯಾಕೆಂದರೆ ಲೋಕ ಇರುವುದೇ ಹಾಗೆ. ಎಲ್ಲರಿಗೂ ತಮ್ಮ ತಮ್ಮ ಸ್ವಾರ್ಥದ್ದೇ ಚಿಂತೆ.

ಆರ್ಥಿಕ ವಿಷಯವನ್ನು ಇದಕ್ಕಿಂತಲೂ ಅಚ್ಚುಕಟ್ಟಾಗಿ ನಾನೆಲ್ಲೂ ಓದಿದ ನೆನಪಿಲ್ಲ. ನಮ್ಮಂತಹ ಕೆಳಮಧ್ಯಮ ವರ್ಗಗಳಲ್ಲಿ ನಿತ್ಯ ನಡೆಯುವ ಪ್ರಸಂಗವಾದುದರಿಂದ ಕಥೆ ಮತ್ತಷ್ಟು ಆಪ್ತವಾಗುತ್ತಾ ಹೋಗುತ್ತದೆ. ಮೊದಲು ಹಣವಿಲ್ಲದೇ ಪರದಾಡಿದವರು, ನಂತರ ವಿಪರೀತ ಹಣ ಕಂಡು ಸಿಕ್ಕಾಪಟ್ಟೆ ದುಂದುವೆಚ್ಚ ಮಾಡುತ್ತಾರೆ. ತಮಗೆ ಬೇಡದೇ ಇರುವುದನ್ನು ಕೊಂಡು ತಂದು ಮನೆ ತುಂಬಿಸುತ್ತಾರೆ. ನಮಗೆ ಬೇಡದ ವಸ್ತುಗಳೇ ಮನೆಯಲ್ಲಿರುವಾಗ, ಆ ಮನೆಯ ಮೇಲಿನ ಮೋಹ ಮಾಯವಾಗುತ್ತದೆ ಅಂತ ಲೇಖಕರು ನಿರ್ಲಿಪ್ತವಾಗಿ ಸತ್ಯ ಬಿಚ್ಚಿಟ್ಟಿದ್ದಾರೆ.

ಒಂದು ಪುಟ್ಟ ಸ್ಥಳಾವಕಾಶದಲ್ಲಿ‌ ಲೇಖಕರು ನಮಗೆ ಇಡೀ ಪ್ರಪಂಚವನ್ನೇ ಪರಿಚಯಿಸುತ್ತಾರೆ. ನಾವು ಆ ಪಾತ್ರಗಳನ್ನು ಓದುತ್ತಾ, ನಮ್ಮ ಜೀವನದಲ್ಲಿ ನಡೆದಿರಬಹುದಾದ ಘಟನೆಗಳಿಗೆ ಹೋಲಿಸುತ್ತಾ, ಅಕಸ್ಮಾತ್ ಅಂತಹ ಘಟನೆ ನಡೆದಿಲ್ಲದಿದ್ದರೆ ಒಂದೊಮ್ಮೆ ನಡೆದರೆ ಏನು‌ ಮಾಡಬಹುದೆಂದು ಕಲಿಯುತ್ತಾ ಮುಂದೆ ಸಾಗುತ್ತೇವೆ.

ಜನರ ಸಂಪರ್ಕ ಇಲ್ಲದೇ ಒಂಟಿಯಾಗಿ ವಾಸಿಸುವವರಿಗೆ, ಜನರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಹೇಳುವ ಮಾರ್ಗದರ್ಶಿ ಇದು. ಇಷ್ಟು ದಿನ ಯಾಕೆ ಓದಿರಲಿಲ್ಲ ಅಂತ ನನಗೆ ಪಶ್ಚಾತ್ತಾಪವಾಯ್ತು. ಈ ಪುಸ್ತಕವನ್ನು ನನಗೆ ಶಿಫಾರಸ್ಸು ಮಾಡಿದವರು ಯಾರು ಅಂತ ಮರೆತಿದ್ದೇನೆ. ಆದರೂ ಅವರಿಗೆ ನೂರು ವಂದನೆಗಳು.

**********
ಕೆ.ಎ.ಸೌಮ್ಯ
ಮೈಸೂರು

Popular posts from this blog

ಹೇಳಿ ಹೋಗು ಕಾರಣ By (ರವಿ ಬೆಳಗೆರೆ)

Parda & Polygami (Kannada)

ಮೃತ್ಯುಂಜಯ by ನಿರಂಜನ