ಬೆಕ್ಕಿನ ಕಣ್ಣು by ತ್ರಿವೇಣಿ
ಒಬ್ಬ ಹೆಣ್ಣಿನ ಅಸಹಾಯಕತೆ, ಹತಾಶೆಯನ್ನು ತ್ರಿವೇಣಿಯವರಂತೆ ಮತ್ಯಾರಿಗೂ ವರ್ಣಿಸಲು ಸಾಧ್ಯವಿಲ್ಲವೇನೋ? ಅವಳ ಆ ಅದುಮಿಟ್ಟ ಹತಾಶೆಯೇ ಕ್ರೌರ್ಯವಾಗಿ ಹೊರಹೊಮ್ಮುವುದು ಅಂತ ಯಾರಿಗೂ ಅರ್ಥವಾಗೋಲ್ಲ. ಅವಳು ತನ್ನ ಆಕ್ರೋಶ ತೋರಿಸಿದರೆ ಜನ "ಅವಳಿಗೆ ದೆವ್ವ ಮೆಟ್ಟಿದೆ" ಅಂತಷ್ಟೇ ತಿಳಿಯುತ್ತಾರೆ. ಆಗ ದೆವ್ವ ಬಿಡಿಸುವವರನ್ನು ಕರೆದುಕೊಂಡು ಬಂದು ಆ ಹೆಣ್ಣಿಗೆ ಚಿತ್ರಹಿಂಸೆ ನೀಡುತ್ತಾರೆ. ಆದರೆ ತ್ರಿವೇಣಿ ಅವರು ಮಾತ್ರವೇ ಅವಳ ಈ ಮನಸ್ಥಿತಿಯ ಹಿಂದಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಮ್ಮ ಮುಂದೆ ಇಡುತ್ತಾರೆ.
ಕಥೆ ಹೀಗಿದೆ.
ತನ್ನ ತಾಯಿಯ ಅಕ್ಕರೆಯಲ್ಲಿ ಮಿಂದು ಬೆಳೆಯುತ್ತಿದ್ದ ಒಬ್ಬ ಸ್ವತಂತ್ರ ಮನೋಭಾವದ ಹೆಣ್ಣುಮಗಳು ಕುಸುಮ, ಬುದ್ಧಿಯೇ ಇರದ ಚಿಕ್ಕ ವಯಸ್ಸಿನಲ್ಲಿ ತನಗೆ ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾಗಿದ್ದ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಈಗ ತನ್ನ ತಾಯಿ ಇಲ್ಲ ಅಂತಷ್ಟೇ ಗೊತ್ತಿರುತ್ತದೆ ಹೊರತೂ ಯಾಕಿಲ್ಲ ಅಂತಲೂ ಅರ್ಥವಾಗದ ವಯಸ್ಸು ಅವಳದ್ದು. ಆಗವಳ ತಂದೆ ಮತ್ತೊಮ್ಮೆ ಮದುವೆ ಆಗ್ತಾರೆ.
ಅವರಿಗೆ ಮದುವೆ ಆಗಬೇಡಿ ಅಂತ ಹೇಳಲು ನಾವ್ಯಾರು?
ಹೆಂಡತಿಯಿಲ್ಲದ ರಾಯರು ಮನೆಕೆಲಸದ ಜೊತೆ ಮಗಳ ಪಾಲನೆಯಲ್ಲಿ ಸೋತು ಬಿಟ್ಟಿರುತ್ತಾರೆ. ಹೆಣ್ಣಿಲ್ಲದ ಮನೆಯೂ ಒಂದು ಮನೆಯೇ? ಅದಕ್ಕಾಗಿ ಅವರು ಮತ್ತೊಂದು ಹೆಣ್ಣನ್ನು ಮದುವೆ ಆಗುತ್ತಾರೆ. ಈ ವಿಷಯದಲ್ಲಿ ಅವರನ್ನು ಕ್ಷಮಿಸೋಣ... ಆದರೆ ಬಲತಾಯಿಯಾಗಿ ಬಂದ ಪದ್ಮ ಪಾಪದ ಮಗುವಾದ ಕುಸುಮಳ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ಹೇಗೆ ಕ್ಷಮಿಸಲು ಸಾಧ್ಯ?
ಪದ್ಮಾ ಕುಸುಮಳಿಂದ ತಾಯಿಯ ಮಮತೆ ಕಿತ್ತುಕೊಳ್ಳುತ್ತಾಳೆ, ತಂದೆಯ ಆಸರೆ ಕಿತ್ತುಕೊಳ್ಳುತ್ತಾಳೆ, ಹಾಲಿನ ಪುಡಿ-ಪಾಕೆಟ್ ಮನಿಗಳಿಂದಲೂ ವಂಚಿತಳಾಗಿಸುತ್ತಾಳೆ. ಅಷ್ಟೇ ಅಲ್ಲದೇ ಕುಸುಮಳ ಚಿನ್ನದ ಅವಲಕ್ಕಿ ಸರ ಕದ್ದು ತಾನಿಟ್ಟುಕೊಳ್ಳುತ್ತಾಳೆ. ಅದನ್ನು ಕುಸುಮ ತೀರಿಹೋದ ತನ್ನ ತಾಯಿಯ ನೆನಪಿಗೆ ಇಟ್ಟುಕೊಂಡಿರುತ್ತಾಳೆ. ಅಲ್ಲದೇ ಆ ಮಗುವಿಗೆ ಚಿನ್ನದ ಬೆಲೆ ಗೊತ್ತಿರುತ್ತದೆಯೇ?
ಆದರೆ ಆ ಸರ ಕದ್ದದ್ದು ತನ್ನದೇ ಚಿಕ್ಕಮ್ಮ ಅಂತ ಗೊತ್ತಾದಾಗ ಪುಟ್ಟ ಮಗು ಏನು ಮಾಡಬೇಕು? ಕೇಳಲು ಹೋದಾಗ ಬಲತಾಯಿ ಪದ್ಮ ಆ ಬಡಪಾಯಿ ಮಗುವಿನ ಮೇಲೆ ತನ್ನ ಶೌರ್ಯ ಪ್ರದರ್ಶಿಸಿ ಅದರ ಬಾಯಿ ಮುಚ್ಚಿಸುತ್ತಾಳೆ. ಇನ್ನೊಮ್ಮೆ ತಂದೆ ಅಥವಾ ತಾಯಿಯಿಂದ ಎಂದೂ ದೂರ ಮಲಗದಿದ್ದ ಮಗುವನ್ನು ಗುಡುಗು-ಸಿಡಿಲಿನ ಮಳೆರಾತ್ರಿಯಲ್ಲಿ ನಡುಮನೆಯಲ್ಲಿ ಒಂಟಿಯಾಗಿ ಮಲಗಿಸಿದ್ದೂ ಅಲ್ಲದೇ ಕಿರಿಚಿದರೆ ಆಚೆ ತಳ್ಳುತ್ತೇನೆ ಅಂತ ಬೆದರಿಕೆ ಹಾಕುತ್ತಾಳೆ. ಈ ಘಟನೆ ಕುಸುಮಳ ಮನದಾಳದಲ್ಲಿ ಉಳಿದು ಬಿಡುತ್ತದೆ. ಕುಸುಮ ಬಲತಾಯಿಗೆ ಏನೂ ಮಾಡಲಾಗದೇ ಆಕೆಯ ಮೇಲಿನ ಕೋಪವನ್ನು ತನ್ನ ಸಾಕುಬೆಕ್ಕಿಗೆ ಹೊಡೆದು ಹಿಂಸಿಸುವುದರ ಮೂಲಕ ತೀರಿಸಿಕೊಳ್ಳಲು ಶುರು ಮಾಡುತ್ತಾಳೆ. ಕಾರಣ ಏನೆಂದರೆ.... ತನ್ನ ಚಿಕ್ಕಮ್ಮನ ಕಣ್ಣುಗಳೂ ಬೆಕ್ಕಿನ ಕಣ್ಣಿನ ಹಾಗೆಯೇ ಇರುತ್ತವೆ!!!!
ಪದ್ಮಳಿಗೆ ಗಂಡನಿದ್ದಾನೆ, ರಾಯರಿಗೆ ಹೆಂಡತಿಯಿದ್ದಾಳೆ, ಅವರಿಬ್ಬರಿಗೂ ತಮಗೆ ಹುಟ್ಟಿದ ಮಗುವಿದೆ. ಆದರೆ ಕುಸುಮಳಿಗೆ ಯಾರಿದ್ದಾರೆ? ತನಗ್ಯಾರೂ ಇಲ್ಲ... ತಾನ್ಯಾರಿಗೂ ಬೇಡ... ಅಂತ ಕುಸುಮ ಹತಾಶೆಯಿಂದ ಕುಗ್ಗುವಷ್ಟರಲ್ಲಿ ಅವಳ ಬಾಳಿಗೆ ತಂಗಾಳಿಯಂತೆ ಬಲತಾಯಿ ಪದ್ಮಳ ತಮ್ಮ ರಾಜಶೇಖರ ಬರುತ್ತಾನೆ. ಅವನೊಂದಿಗೆ ಪದ್ಮ ಬಹಳ ಖುಷಿಯಿಂದ ಇರುತ್ತಾಳೆ. ಆದರೆ ಬಲತಾಯಿ ಕುಸುಮಳನ್ನು ಅವನಿಂದಲೂ ದೂರ ಮಾಡಲು ನೋಡುತ್ತಾಳೆ.
ತಾನು ಜೀವಿಸಲು ಇದ್ದ ಎಲ್ಲಾ ಆಧಾರಗಳನ್ನು ಕಿತ್ತೊಕೊಂಡ ಬಲತಾಯಿ, ಈಗ ಅವಳಿಗೆ ಇರುವ ಏಕೈಕ ಆಧಾರವಾದ ರಾಜಶೇಖರನನ್ನೂ ದೂರ ಮಾಡಲು ಹೊರಟರೆ ಅವಳ ಮನಸ್ಥಿತಿ ಏನಾಗಬೇಕು? ಹುಚ್ಚು ಮಿತಿ ಮೀರಿ ಹೋಗಿ ಕುಸುಮಳನ್ನು ಹುಚ್ಚಾಸ್ಪತ್ರೆಗೆ ಸೇರಿಸಲಾಗುತ್ತದೆ.
ಅವಳು ಅಲ್ಲಿಂದ ಗುಣವಾಗುವಳೇ?
ರಾಜಶೇಖರ ನಿಜವಾಗಿಯೂ ಅವಳಿಗೆ ಆಸರೆಯಾಗುವನೇ?
ಅವಳ ಈ ಮಾನಸಿಕ ಸ್ಥಿತಿಗೆ ಕಾರಣ ಯಾರು?
ಮೇಲಿನ ಪ್ರಶ್ನೆಗಳಿಗೆ ಕಾದಂಬರಿ ಓದುವುದೊಂದೇ ಉತ್ತರ. ಓದುಗರನ್ನು ಹಿಡಿದಿಡುವಂತಹಾ ಶೈಲಿ ತ್ರಿವೇಣಿಯವರದ್ದು. ಅಲ್ಲದೇ ಅವರು ಒಬ್ಬರದೇ ಪಕ್ಷ ಹಿಡಿದು ಬರೆಯುವುದಿಲ್ಲ. ಒಂದೇ ಘಟನೆಯನ್ನು ರಾಯರ ದೃಷ್ಟಿಕೋನದಿಂದ, ಬಲತಾಯಿ ಪದ್ಮಾಳ ದೃಷ್ಟಿಕೋನದಿಂದಲೂ ವಿಮರ್ಶಿಸುತ್ತಾರೆ. ಆಗ ನಮಗೆ ಅರಿವಾಗುವುದು ಏನೆಂದರೆ.... ಈ ಎಲ್ಲಾ ಘಟನೆಗಳಿಗೂ ಯಾವುದೇ ವ್ಯಕ್ತಿ ಕಾರಣವಲ್ಲ, ಕೇವಲ ಸಂದರ್ಭಗಳು ಕಾರಣ ಅಂತ....
ಓದಿದರೆ ಇಷ್ಟವಾಗುವುದು.
************
ಕೆ.ಎ.ಸೌಮ್ಯ
ಮೈಸೂರು
